ಮಲೆನಾಡಿನ ಮಳೆಗಾಲ ಒಂದು ರೀತಿಯ ಹಿತ ಆದ್ರೂ ಅಲ್ಲಿಯ ಜನಕ್ಕೆ ಕೆಲವೊಮ್ಮೆ ಕಿರಿಕಿರಿಯೇ . ಮಳೆ ಬರ್ಲೇ ಬೇಕು , ಆದ್ರೆ ಕೆಲವೊಮ್ಮೆ ರೇಜಿಗೆ ಹುಟ್ಟಿಸೋದು ಇದೆ . ನದಿಯ ನೀರು ಸೇತುವೆ ಮೇಲೆ ಬಂದು ರಸ್ತೆ ಮುಚ್ಚಿ ಹೋಗಿ ದಿನಗಟ್ಲೆ ಊರಿನ ಸಂಪರ್ಕ ಕಡಿದು ಹೋಗಿದ್ದು ಇದೆ . ನಮ್ಮೂರು ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕು ಹಾಗೂ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಗಡಿಯಲ್ಲಿರೋ ಪುಟ್ಟ ಹಳ್ಳಿ . ಮಳೆಗಾಲದ ರಾಜಧಾನಿ ಆಗುಂಬೆಗೆ ಸುಮಾರು 25 ಕಿಲೋಮೀಟರ್ ದೂರ . ಊರಿನ ಹೆಸರು ಹಾಲ್ಮುತ್ತೂರು ಸುಮಾರು 100 ಮನೆ ಇರೋ ಪುಟ್ಟ ಊರು . ಗಂಟೆಗೊಂದು ಬಸ್ಸು ಕೊಪ್ಪಕ್ಕೆ , ತುಂಗೆ ಊರಿಂದ 3 ಕಿಲೋಮೀಟರ್ ದೂರ ಹರಿತಾಳೆ . ಊರಲ್ಲಿ ಹರಿಯೋ ಭಾಗಿ ಹಳ್ಳಕ್ಕೆ ಸೇತುವೆ ನನ್ನ ಮುತ್ತಜ್ಜ ಕಟ್ಟಿಸಿದ್ದು ಅಂತ ಅಜ್ಜ ಹೇಳ್ತಿರ್ತಾರೆ . ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ . ಮಾವಿನಕಟ್ಟೆ ಕಡೆ ಇಂದ ಹರಿದುಬರೊ ಭಾಗಿ ಹಳ್ಳ ಕುಡಿನಹಳ್ಳಿ ಬಳಿ ತುಂಗೆ ಒಡಲಿಗೆ ಸೇರತ್ತೆ . ಬೇಸಿಗೆಯಲ್ಲಿ ಸ್ವಲ್ಪೇ ಸ್ವಲ್ಪ ನೀರಿದ್ರೂ ಮಳೆಗಾಲದಲ್ಲಿ ಆದರದು ರೌದ್ರಾವತಾರ . ಅಕ್ಕ ಪಕ್ಕದ ಗದ್ದೆ ಅಡಿಕೆ ತೋಟಕ್ಕೆಲ್ಲ ನುಗ್ಗಿ ನೆರೆ ಸೃಷ್ಟಿಸೋದ್ರಲ್ಲಿ ಎತ್ತಿದ ಕೈ . ಭಾಗಿಹಳ್ಲದ್ದು ಈ ಕಥೆ ಆದ್ರೆ ಕೊಂಚ ದೂರ ಹರಿಯೋ ತುಂಗೆಯ ಅವತಾರವೇ ಬೇರೆ . ಹರಿಹರಪುರದಲ್ಲಿತುಂಗ ಸೇತುವೆ ದಾಟಿ ಊರಿಂದ ಮುಂದೆ ಬಲಕ್ಕೆ ತಿರುಗಿ 13 ಕಿಲೋಮೀಟರ್ ಬಂದ್ರೆ ಹಾಲ್ಮುತ್ತೂರು . ಮಧ್ಯ...