ಬೆಳಗಿನ ೧೧ ಗಂಟೆ. ಶನಿವಾರವಾದ್ದರಿಂದ ನಿಧಾನಕ್ಕೆ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ತಿಂಡಿ ಮಾಡಿ ಬ್ಯಾಂಕಿನಲ್ಲಿ ಸ್ವಲ್ಪ ಕೆಲಸವಿದ್ದುದರಿಂದ ಹೊರಗೆ ಬಂದೆ. ನೋಡಿದರೆ ದೂರದ ಕೆರೆಯ ಬಳಿ ಜನರೆಲ್ಲಾ ಸೇರಿ ಬಿಟ್ಟಿದ್ದಾರೆ. ಏನೆಂದು ಹೋಗಿ ನೋಡುವಷ್ಟು ವ್ಯವಧಾನ ನನಗಿಲ್ಲ. ಆದರೂ ಕುತೂಹಲ ತಡೆಯಲಾರದೆ ಹೋಗಿ ನೋಡಿದೆ. ಜನರೆಲ್ಲಾ ಸೇರಿ ಕೆರೆಯೊಳಗಿಂದ ಒಂದು ದೇಹ ಮತ್ತೊಂದು ಸ್ಕೂಟರ್ ಎಳೆದು ಹಾಕಿದ್ದಾರೆ. ಯಾರೋ ರಾತ್ರಿ ಸರಿ ಹೊತ್ತಿನಲ್ಲಿ ಗಾಡಿ ಓಡಿಸುತ್ತಾ ಬಂದು ದಾರಿ ಕಾಣದೆ ಕೆರೆಯಲ್ಲಿ ಬಿದ್ದಿರಬೇಕು. ಪಾಪ. ಪೊಲೀಸರು ಕೂಡ ಬಂದಿದ್ದಾರೆ , ಅವರ ಕ್ರಿಯೆಗಳೆಲ್ಲ ಮುಗಿದಮೇಲೆ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ತೆಗೆದುಕೊಂಡು ಹೋದರು. ನಾನು ನನ್ನ ಕಾರ್ಯದ ನಿಮಿತ್ತ ಬ್ಯಾಂಕಿನೆಡೆಗೆ ನೆಡೆದೆ. ನನ್ನ ಮನೆ ಎದುರಿನ ರಸ್ತೆ ದಾಟಿದ ನಂತರ ಸಿಗುವ ಖಾಲಿ ಜಾಗದಲ್ಲಿ ಹುಲ್ಲು ಬೆಳೆದಿದೆ. ಸುಮಾರು ನೂರಿನ್ನೂರು ಮೀಟರ್ ನೆಡೆದರೆ ಇರುವುದೇ ಆ ಕೆರೆ. ಬೇಸಿಗೆಯಲ್ಲಿ ಕೆರೆಯಲ್ಲದಿದ್ದರೂ ಮಳೆಗಾಲದಲ್ಲಿ ಹರಿದು ಬರುವ ನೀರೆಲ್ಲ ತಗ್ಗಿನಲ್ಲಿ ನಿಂತು ೨೦-೩೦ ಅಡಿ ಆಳದ ಕೆರೆಯಾಗಿ ಬದಲಾಗುತ್ತದೆ. ಈ ವರ್ಷದ ಮಳೆಗಾಲ ಕೂಡ ಬಲು ಬಿರುಸು. ಕೊನೆಕೊನೆಯಲ್ಲಿ ಎಡಬಿಡದೆ ಸುರಿದ ಮಳೆ ಈಗ ಕೊಂಚ ಬಿಡುವು ಕೊಟ್ಟಿದೆ. ಹಾಂ ಹಾಗೆಂದು ಕೆರೆಗೆ ದಾರಿಯೆಂದೇನೂ ಇಲ್ಲ. ಹುಲ್ಲಿನ ಮೇಲೆ ನೆಡೆದು ಹೋಗಬಹುದಷ್ಟೆ. ಅಲ್ಲಲ್ಲಿ ಹಾವುಗಳು ಕೂಡ ಇವೆ , ಹಾಗೆಂದು ಅಲ್ಲಿಗೆ...