ಬೆಳಗಿನ ೧೧ ಗಂಟೆ. ಶನಿವಾರವಾದ್ದರಿಂದ
ನಿಧಾನಕ್ಕೆ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ತಿಂಡಿ ಮಾಡಿ ಬ್ಯಾಂಕಿನಲ್ಲಿ ಸ್ವಲ್ಪ
ಕೆಲಸವಿದ್ದುದರಿಂದ ಹೊರಗೆ ಬಂದೆ. ನೋಡಿದರೆ ದೂರದ ಕೆರೆಯ ಬಳಿ ಜನರೆಲ್ಲಾ ಸೇರಿ ಬಿಟ್ಟಿದ್ದಾರೆ.
ಏನೆಂದು ಹೋಗಿ ನೋಡುವಷ್ಟು ವ್ಯವಧಾನ ನನಗಿಲ್ಲ. ಆದರೂ ಕುತೂಹಲ ತಡೆಯಲಾರದೆ ಹೋಗಿ ನೋಡಿದೆ.
ಜನರೆಲ್ಲಾ ಸೇರಿ ಕೆರೆಯೊಳಗಿಂದ ಒಂದು ದೇಹ
ಮತ್ತೊಂದು ಸ್ಕೂಟರ್ ಎಳೆದು ಹಾಕಿದ್ದಾರೆ. ಯಾರೋ ರಾತ್ರಿ ಸರಿ ಹೊತ್ತಿನಲ್ಲಿ ಗಾಡಿ ಓಡಿಸುತ್ತಾ
ಬಂದು ದಾರಿ ಕಾಣದೆ ಕೆರೆಯಲ್ಲಿ ಬಿದ್ದಿರಬೇಕು. ಪಾಪ. ಪೊಲೀಸರು ಕೂಡ ಬಂದಿದ್ದಾರೆ, ಅವರ ಕ್ರಿಯೆಗಳೆಲ್ಲ ಮುಗಿದಮೇಲೆ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ತೆಗೆದುಕೊಂಡು
ಹೋದರು. ನಾನು ನನ್ನ ಕಾರ್ಯದ ನಿಮಿತ್ತ ಬ್ಯಾಂಕಿನೆಡೆಗೆ ನೆಡೆದೆ.
ನನ್ನ ಮನೆ ಎದುರಿನ ರಸ್ತೆ ದಾಟಿದ ನಂತರ
ಸಿಗುವ ಖಾಲಿ ಜಾಗದಲ್ಲಿ ಹುಲ್ಲು ಬೆಳೆದಿದೆ. ಸುಮಾರು ನೂರಿನ್ನೂರು ಮೀಟರ್ ನೆಡೆದರೆ ಇರುವುದೇ ಆ
ಕೆರೆ. ಬೇಸಿಗೆಯಲ್ಲಿ ಕೆರೆಯಲ್ಲದಿದ್ದರೂ ಮಳೆಗಾಲದಲ್ಲಿ ಹರಿದು ಬರುವ ನೀರೆಲ್ಲ ತಗ್ಗಿನಲ್ಲಿ ನಿಂತು
೨೦-೩೦ ಅಡಿ ಆಳದ ಕೆರೆಯಾಗಿ ಬದಲಾಗುತ್ತದೆ. ಈ ವರ್ಷದ ಮಳೆಗಾಲ ಕೂಡ ಬಲು ಬಿರುಸು.
ಕೊನೆಕೊನೆಯಲ್ಲಿ ಎಡಬಿಡದೆ ಸುರಿದ ಮಳೆ ಈಗ ಕೊಂಚ ಬಿಡುವು ಕೊಟ್ಟಿದೆ. ಹಾಂ ಹಾಗೆಂದು ಕೆರೆಗೆ
ದಾರಿಯೆಂದೇನೂ ಇಲ್ಲ. ಹುಲ್ಲಿನ ಮೇಲೆ ನೆಡೆದು ಹೋಗಬಹುದಷ್ಟೆ. ಅಲ್ಲಲ್ಲಿ ಹಾವುಗಳು ಕೂಡ ಇವೆ,
ಹಾಗೆಂದು ಅಲ್ಲಿಗೆ ಯಾರು ಹೋಗುವುದಿಲ್ಲ. ಹೀಗೆಲ್ಲ ಯೋಚಿಸುತ್ತಾ ಬ್ಯಾಂಕಿನೆಡೆಗೆ
ನನ್ನ ಕಾರು ಚಲಾಯಿಸುತ್ತಿದ್ದೆ. ಥಟ್ಟನೆ ನೆನಪಾಯ್ತು, ಆ
ಕೆರೆಗೆ ದಾರಿಯೇ ಇಲ್ಲವೆಂದಮೇಲೆ ಕತ್ತಲಲ್ಲಿ ಕೆರೆಯಬಳಿ ಸ್ಕೂಟರ್ ತೆಗೆದುಕೊಂಡು ಹೋಗಿದ್ದೇಕೆ?
ದಾರಿ ಕಾಣದೆ ಹೋಗಿರಲು ಸಾಧ್ಯವೇ ಇಲ್ಲ. ದಾರಿಯೇ ಇಲ್ಲವೆಂದಮೇಲೆ ಕಾಣಲು
ಕಾಣದಿರಲು ಹೇಗೆ ಸಾಧ್ಯ?
ಹಾಗಾದರೆ ಇದು ಆತ್ಮಹತ್ಯೆ ಅಲ್ಲ, ಖಂಡಿತ ಕೊಲೆ. ಯಾರೋ ಕೊಲೆ ಮಾಡಿ
ದೇಹದ ಜೊತೆಗೆ ಸ್ಕೂಟರ್ ತಂದು ಇಲ್ಲಿಗೆ ಹಾಕಿರಬಹುದು. ಇದನ್ನು ಪೊಲೀಸರಿಗೆ ಹೇಗೆ ಹೇಳುವುದು
ಎಂದು ಯೋಚಿಸುತ್ತಿದ್ದೆ. ಥಟ್ಟನೆ ಹೊಳೆದದ್ದು ನನ್ನ ಮನೆಯ ಮೇಲೆ ಹಾಕಿದ್ದ cctv ಕ್ಯಾಮೆರಾ ದ ನೆನಪು.
ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ಓಡೋಡಿ
ಬಂದವನೇ ಕಂಪ್ಯೂಟರ್ ಆನ್ ಮಾಡಿದೆ. ಕ್ಯಾಮೆರಾ ದ ರೆಕಾರ್ಡಿಂಗ್ ಇದ್ದ ಫೋಲ್ಡರ್ ಗೆ ಹೋಗಿ ನಿನ್ನೆ
ರಾತ್ರಿಯ ರೆಕಾರ್ಡಿಂಗ್ ವೀಕ್ಷಿಸಲು ಶುರು ಮಾಡಿದೆ.
ಸುಮಾರು ೩ ಗಂಟೆ ರಾತ್ರಿ. ಸ್ಕೂಟರ್ ನಲ್ಲಿ
ಬಂದ ಇಬ್ಬರು ಮನೆಯ ಮುಂದೆ ನಿಂತರು. ಹತ್ತು ನಿಮಿಷ ಏನೋ ವಾದ ವಿವಾದ, ಆಗ
ಸ್ಕೂಟರ್ ಓಡಿಸುತ್ತಿದ್ದವ ಜೇಬಿಂದ ಏನೋ ತೆಗೆದು ಇನ್ನೊಬ್ಬನ ಮೂಗಿಗೆ ಹಿಡಿದ. ಆತ ತಕ್ಷಣವೇ
ಪ್ರಜ್ಞೆ ಕಳೆದು ಕೊಂಡ. ಸ್ಕೂಟರ್ನಿಂದ ಹಗ್ಗ ತೆಗೆದ ಮೊದಲಿನವ ಈತನ ಕೈ ಕಾಲು ಕಟ್ಟಿ ಒಂದು ದೊಡ್ಡ ಕಲ್ಲು ತಂದು ಬಿಗಿದ. ಮತ್ತೆ
ಗಾಡಿಯ ಮೇಲೆ ಕೂರಿಸಿ ಸೀದಾ ಕೆರೆಯೆಡೆಗೆ ಓಡಿಸಿದ. ಆ ಕತ್ತಲಲ್ಲಿ ಉಬ್ಬು ತಗ್ಗಿನ ರಸ್ತೆ,
ಗಾಡಿಯ ಬೆಳಕು ಕೂಡ ತೀಕ್ಷ್ಣವಿಲ್ಲ. ಇನ್ನೇನು ಸ್ಕೂಟರ್ ಮತ್ತು ಆ ಪ್ರಜ್ಞೆ
ಇಲ್ಲದೆ ಕುಳಿತಿದ್ದ ವ್ಯಕ್ತಿಯನ್ನು ಕೆರೆಯೊಳಗೆ ತಳ್ಳಬೇಕು, ಅಷ್ಟರಲ್ಲಿ
ದಾರಿ ಕಾಣದೆ ಈತ ಕೂಡ ಸ್ಕೂಟರಿನೊಡನೆ ಕೆರೆಯೊಳಗೆ ಇಳಿದ. ಹೊರಬರಲು ಒದ್ದಾಡುತ್ತಿದ್ದಾನೆ,
ಆಗುತ್ತಿಲ್ಲ. ಸ್ಕೂಟರ್ ಮತ್ತು ಕಲ್ಲು ಕಟ್ಟಿದ್ದ ವ್ಯಕ್ತಿಯಾದರೂ ಆಗಲೇ
ಮುಳುಗಿಯಾಗಿದೆ. ಈತ ಸುಮಾರು ೧೦ ನಿಮಿಷ ಒದ್ದಾಡಿದ ನಂತರ ಮುಳುಗಿ ಹೋದ. ಇನ್ಯಾರನ್ನೋ ಜೀವಂತ ಶವ
ಮಾಡಲು ಬಂದು ಈತನೇ ಭೀಕರ ರೀತಿಯಲ್ಲಿ ಶವವಾದ.
ಇದೆಲ್ಲ ನೋಡುತ್ತಿದ್ದ ನಾನು ಬೆವರಿನಲ್ಲಿ
ತೋಯ್ದು ಹೋಗಿದ್ದೆ. ಇದನ್ನು ನಾಳೆ ಬೆಳಗ್ಗೆಯೇ ಪೊಲೀಸರಿಗೆ ತೋರಿಸ ಬೇಕು ಎಂದು ನಿರ್ಧರಿಸಿ
ಅಂದಿನ ನನ್ನ ಕೆಲಸಗಳನ್ನ ಮುಗಿಸಿ ಮಲಗಿದೆ.
ರಾತ್ರಿ ಸುಮಾರು ೧೨:೩೦, ಏನೋ ಸದ್ದಾಗಿ ಎಚ್ಚರವಾದಂತಾಯ್ತು. ಕಣ್ಣು ಬಿಟ್ಟು ಕಿಟಕಿಯ ಬಳಿ ನೋಡಿದೆ. ಯಾರೋ
ಎತ್ತರದ ಮನುಷ್ಯ ನಿಂತಿದ್ದಾನೆ. ದೇಹವೆಲ್ಲ ಬಿಳುಚಿಕೊಂಡಿದೆ, ಕಾಲಿಗೊಂದು
ಕಲ್ಲು ಕಟ್ಟಿಕೊಂಡೇ ಬಂದಿದ್ದಾನೆ. ಕಣ್ಣೆಲ್ಲ ಮೀನು ತಿಂದ ಹಾಗೆ ಗುಡ್ಡೆಗಳಿದ್ದ ಜಾಗ ಖಾಲಿ
ಬಿದ್ದಿದೆ. ಕೈ ಗೆ ಕಟ್ಟಿದ ಹಗ್ಗ ಇನ್ನೂ ಹಾಗೆ ಇದೆ. ಇದ್ದಾರೆಂದು ತೋಚುವ ಮುನ್ನವೇ ಹೊಳೆಯಿತು,
ಇದು ರಾತ್ರಿ ಕೊಲೆಯಾದ ಆದರೆ ದೇಹ ಸಿಗದ ವ್ಯಕ್ತಿ ಎಂದು.
ಆತನೇ ಮಾತು ಶುರು ಮಾಡಿದ. ನಿನ್ನೆ ನಾನು
ನನ್ನ ತಮ್ಮ ಸ್ಕೂಟರ್ನಲ್ಲಿ ಬರುವಾಗ ಜಮೀನಿನ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಆತ ನನ್ನ ಕೊಲೆ
ಮಾಡಿದ, ಆದರೆ ವಿಧಿ, ಆತನೂ
ಸತ್ತು ಹೋದ. ಇದಲ್ಲವೇ ವಿಧಿಯ ಕುಹಕ? ಇರಲಿ, ಆತನ
ದೇಹವೇನೋ ಸಿಕ್ಕಿ ಆತ್ಮಕ್ಕೆ ಮುಕ್ತಿ ದೊರಕಿತು. ಆದರೆ ನಾನು? ನನಗೆ
ಮುಕ್ತಿ? ಇನ್ನೆಲ್ಲಿಯ ಮುಕ್ತಿ? ನನ್ನ
ದೇಹ ಇಲ್ಲೇ ಕೆರೆಯೊಳಗೆ. ಅದಕ್ಕೊಂದು ಅಂತ್ಯ ದೊರಕುವವರೆಗೂ ನನ್ನ ಆತ್ಮಕ್ಕೆಲ್ಲಿಯ ಮುಕ್ತಿ?
ದಯವಿಟ್ಟು ನನಗೆ ಸಹಾಯ ಮಾಡು ಎಂದು ನನ್ನ ದೇಹವನ್ನು ಅಲುಗಾಡಿಸತೊಡಗಿದ.
ಧಡಕ್ಕನೆ ಎದ್ದು ಕುಳಿತೆ. ಗಂಟಲ ಪಸೆಯೆಲ್ಲಾ
ಆರಿ ಹೋಗಿತ್ತು. ದೀಪ ಹಾಕಿ ಕಿಟಕಿಯ ಬಳಿ ನೋಡಿದೆ, ಅಲ್ಯಾರು
ಇಲ್ಲ. ಹಾಗಾದರೆ ನಾ ಕಂಡದ್ದು ಕನಸೇ? ಯಾವುದು ಕನಸು? ಕೊಲೆಯಾಗಿದ್ದು
ಕನಸೇ ಅಥವಾ ಕೊಳೆತ ಶವವೊಂದು ನನ್ನ ಬಳಿ ಮಾತನಾಡಿದ್ದು ಕನಸೇ?
ಮನಸ್ಸು ವಿಚಿತ್ರ ರೀತಿಯಲ್ಲಿ
ಸಿಕ್ಕಿಹಾಕಿಕೊಂಡಿತ್ತು, ಏನೊಂದು ಅರ್ಥ ವಾಗುತ್ತಿಲ್ಲ, ಕನಸ್ಯಾವುದು, ನಿಜ ಯಾವುದು, ವರ್ತಮಾನ
ಭೂತ ಕಾಲಗಳು ನನ್ನ ಕಲ್ಪನೆಗೆ ಸಿಕ್ಕಿ ವಿಲವಿಲನೆ ಒದ್ದಾಡಿ ನನ್ನ ಯೋಚನಾ ಲಹರಿಯನ್ನೇ ಬುಡಮೇಲು
ಮಾಡಿವೆ. ಈ ಮನಸ್ಥಿತಿ ಇಂದ ಹೊರ ಬರುವ ಬಗೆ ಹೇಗೆ?
ವಾಚ್ ನೋಡಿಕೊಂಡೆ. ಒಹ್ ಸಮಯ ೩ ಗಂಟೆ,
ಶನಿವಾರ. ಅಂದರೆ ಇದುವರೆಗೂ ನಾನು ಕಂಡದ್ದೆಲ್ಲವೂ ಕನಸೇ. ನಾನು ಬ್ಯಾಂಕಿಗೆ
ಹೋಗಿದ್ದು, ಪೊಲೀಸರು ಬಂದು ಶವ ಹೊರಗೆಳೆದಿದ್ದು,
ನಾನು cctv ವೀಕ್ಷಣೆ ಮಾಡಿದ್ದು, ಮಲಗಿದ ಮೇಲೆ ಕೊಳೆತ ದೇಹವೊಂದು ನನ್ನ ಜೊತೆ ಮಾತಾಡಿದ್ದು, ಮುಕ್ತಿ ದೊರಕಿಸೆಂದು ಬೇಡಿದ್ದು. ಇದೆಲ್ಲವೂ ಕನಸೇ? ಒಹ್
ನನ್ನ ಮನೆಯಲ್ಲಿ cctv ಕ್ಯಾಮೆರವೇ ಇಲ್ಲವಲ್ಲ. ಹಾಗಾದ್ರೆ ನಾ
ಇದುವರೆಗೂ ಜೀವಿಸಿದ್ದು ಕನಸಲ್ಲಿ, ಈ ಘಟನೆಗಳೆಲ್ಲ ಜರುಗಿದ್ದು ಕನಸಲ್ಲಿ ಮಾತ್ರ.
ನೀರು ಕುಡಿದು ಮೇಲೆ ಬಂದು ಮಲಗಿದೆ. ನಿದ್ದೆ
ಹತ್ತುತ್ತಿಲ್ಲ, ಏನೇನೋ ಯೋಚನೆ, ಅದು
ಕನಸು ಎಂಬುದು ಮನಸ್ಸಿಗೆ ಅರಿವಾದರೂ ಏನೋ ತಳಮಳ, ಕಣ್ಣು
ಮುಚ್ಚಿದರೆ ಆ ಶವ ನನ್ನೆದುರು ನಿಂತಂತೆ ಭಾಸ. ಹೀಗೆ ಹೊರಳಾಡುತ್ತಾ ಮಲಗಿದ್ದೆ, ಮನೆ ಎದುರಿಗೆ ಯಾವುದೋ ಸ್ಕೂಟರ್ ನಿಂತಂತಾಯ್ತು. ಎದ್ದು ದೀಪ ಹಾಕದೆ ಕಿಟಕಿ ಇಂದ ಕೆಳ
ನೋಡಿದೆ.
ಇಬ್ಬರು ನಿಂತು ಏನೋ ಮಾತಾಡುತ್ತಿದ್ದರು. ವಾದ
ವಿವಾದ ನೆಡೆಯುವ ಹಂತ ತಲುಪಿತ್ತು. ಗಾಡಿ ಓಡಿಸುವವ ಕೆಳಗಿಳಿದು ಜೇಬಿನಿಂದ ಏನೋ ತೆಗೆದು
ಹಿಂದಿನವನ ಮೂಗಿಗೆ ಹಿಡಿದ, ಅವನೋ ತಕ್ಷಣ ಮೂರ್ಛೆ ಹೋದ. ಸ್ಕೂಟರ್ನಿಂದ
ಹಗ್ಗ ತೆಗೆದ ಮೊದಲಿನವ ಈತನ ಕೈ ಕಾಲು ಕಟ್ಟಿ
ಒಂದು ದೊಡ್ಡ ಕಲ್ಲು ತಂದು ಬಿಗಿದ. ಮತ್ತೆ ಗಾಡಿಯ ಮೇಲೆ ಕೂರಿಸಿ ಸೀದಾ ಕೆರೆಯೆಡೆಗೆ ಓಡಿಸಿದ.
ಈಗ ನಾನು ಮತ್ತೊಂದು ಸಂಧಿಗ್ದಕ್ಕೆ ಸಿಕ್ಕಿ
ಬಿದ್ದೆ. ಇದು ನಿಜವೋ ಅಥವಾ ಕನಸಿನ ಪುನರಾವರ್ತನೆಯೋ? ಸಮಯ
ಕನಸಿನಲ್ಲಿ ಇದ್ದಂತೆಯೇ ೩ ಗಂಟೆ. ಕನಸಿನಲ್ಲಿ ನಡೆದ್ದದ್ದೆಲವೂ ಯಥಾವತ್ ನೆಡೆಯುತ್ತಿದೆ. ಅಂದರೆ
ಇನ್ನೈದು ನಿಮಿಷದಲ್ಲಿ ಅವರಿಬ್ಬರೂ ನನ್ನ ಕಣ್ಣೆದುರೇ ಸಾಯುತ್ತಾರೆ. ಒಬ್ಬನ ಸಾವು ಆತನ ಅರಿವಿಗೆ
ಬರುತ್ತದೆ. ಇನ್ನೊಬ್ಬನದು ನಿಷ್ಚಿಂತೆಯ ಸಾವು. ಅರಿವಿಲ್ಲದೆ ಸಾಯುವ ಭಾಗ್ಯ ಎಲ್ಲರಿಗಿಲ್ಲ.
ನಾನೇನಾದರೂ ಮಾಡಬೇಕಲ್ಲ? ಫೋನ್ ತೆಗೆದು ಹತ್ತಿರದ ಪೊಲೀಸ್ ಠಾಣೆಗೆ ಕರೆ
ಮಾಡಿದೆ. ನನ್ನ ಕನಸು ಹೇಳಿದರೆ ಅವರು ನಂಬುವುದಿಲ್ಲವಲ್ಲ. ಕೊಲೆ ಕೊಲೆ ಎಂದು ಕಿರುಚಿದೆ,
ಅಡ್ರೆಸ್ ನೀಡಿದೆ.
ಇಲ್ಲಿ ಈತನೋ ಇನ್ನೇನು ಕೆರೆಯ ಬಳಿ ಬಂದಿದ್ದಾನೆ,
ಪ್ರಜ್ಞಾಹೀನ ಸ್ಥಿತಿಯಲ್ಲಿರುವ ದೇಹವನ್ನು ಇಳಿಸಿ ನೀರಿಗೆ ದಬ್ಬುವ ಕೆಲಸ ಮಾಡುತ್ತಿದ್ದಾನೆ,
ಆತನೂ ಕೂಡ ೩ ಅಡಿ ಆಳದ ನೀರಿನ ನಡುವೆ ನಿಂತಿದ್ದಾನೆ, ಇನ್ನೇನು
ಎರಡು ದೇಹಗಳೂ ನೀರಿನ ಸೆಳೆತಕ್ಕೆ ಸಿಗಬೇಕು, ಅಷ್ಟರಲ್ಲಿ
ಪೊಲೀಸರು ಬಂದು ದೀಪ ಹಾಕಿದರು. ನಾನು ಕೆಳಗಿಳಿದು ಬಂದು ಎದುರಿನ ಕೆರೆಯ ಕಡೆ ತೋರಿಸಿದೆ.
ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ಎರಡೂ
ದೇಹಗಳನ್ನು ಮೇಲೆಳೆದು ತಂದರು. ಆಂಬುಲೆನ್ಸ್ ಬರಹೇಳಿ ನನ್ನ ಸಹಿ ಪಡೆದು ಅಲ್ಲಿಂದ ಹೊರಟರು.
ಅರ್ಧ ರಾತ್ರಿಯಲ್ಲಿ ೨ ಜೀವ ಉಳಿಸಿದ ಪುಣ್ಯ ನನಗೆ. ಆದರೆ ತಾನು ಕೊಲೆಯಾಗುತ್ತೇನೆಂದು ನನ್ನ
ಕನಸಿನಲ್ಲಿ ಬಂದು ಎಚ್ಚರಿಸಿ ತನ್ನ ಜೀವ ಉಳಿಸಿಕೊಂಡ ಆ ಪುಣ್ಯಾತ್ಮನ ಅತಿಮಾನವ ಶಕ್ತಿಗೆ
ನಮೋನ್ನಮಃ. ಕೊನೆಗೆ ರೂಮಿಗೆ
ಬಂದು ಮಲಗಿದವನು ದೀಪವಾರಿಸಿ ಮಲಗಿದ್ದರೆ ಕೇಳಿ.
Comments
Post a Comment