ಅಂದು
ಭಾನುವಾರ. ಗಣೇಶಯ್ಯನ
ಮನೆಯಲ್ಲಿ ಸಂಭ್ರಮವೋ ಸಂಭ್ರಮ.
ಗಣೇಶಯ್ಯನ
ಧರ್ಮಪತ್ನಿ ಸರೋಜಳಿಗೆ ೩ನೇ ಮಗುವಾದ
ಶುಭ ದಿನ. ೩ನೇ
ಮಗುವೂ ಹೆಣ್ಣಾದರೂ ಗಂಡಾದಷ್ಟೆ
ಖುಷಿ ಮನೆಯವರಿಗೆ. ಅವರೆಂದೂ
ಹೆಣ್ಣು ಗಂಡು ಎಂದು ಭೇದ ಮಾಡಿದವರಲ್ಲ.
ಹೆಣ್ಣು ಮಗುವೂ
ಸಹ ಗಂಡಿನಷ್ಟೇ ಸಬಲೆಯೂ,
ಗಂಡು ಮಕ್ಕಳಿಗಿಂತ
ಪರಿಪೂರ್ಣರೂ ಆಗುತ್ತವೆಂದು ಅವರ
ನಂಬಿಕೆ. ಮೊದಲೆರಡು
ಹೆಣ್ಣು ಮಕ್ಕಳು ಕೂಡ ಆ ಮಾತಿಗೆ
ತಕ್ಕಂತೆಯೇ ನೆಡೆದುಕೊಂಡಿದ್ದವು.
ಶಾಲೆಯಲ್ಲಿ
ಆಟದಲ್ಲಿ ಪಾಠದಲ್ಲಿ ಮುಂದು,
ಮನೆಯಲ್ಲಿ
ಅಮ್ಮನಿಗೆ ಸಹಾಯ, ಅಪ್ಪನೊಟ್ಟಿಗೆ
ಪೇಟೆಗೆ ಹೋಗಿ ತರಕಾರಿ ಸಾಮಾನು
ತರುವುದು, ಸಣ್ಣ
ಪುಟ್ಟ ಕಥೆ ಕವನ ಬರೆಯುವುದು
ಒಟ್ಟಿನಲ್ಲಿ ಬೇರೆ ಮನೆಯ ಹೆಣ್ಣು
ಮಕ್ಕಳು ತಲೆ ತಗ್ಗಿಸುವಂತಹ ಜಾಣ
ಮಕ್ಕಳು.
ಗಣೇಶಯ್ಯ
ಬಹಳ ಪ್ರ್ಯಾಕ್ಟಿಕಲ್ ಮನುಷ್ಯ.
ಕಡ್ಡಿ ಮುರಿದಂತೆ
ಮಾತಾಡುವ ಜಾಯಮಾನ. ಎಲ್ಲರಿಗೂ
ಒಳ್ಳೆಯದಾಗಲಿ ಎಂದು ಬಯಸಿದರೂ
ಕೈ ಎತ್ತಿ ಸಹಾಯ ಮಾಡಿದ್ದು ತೀರಾ
ಕಡಿಮೆ. ತಾನಾಯ್ತು,
ತನ್ನ ಸಂಸಾರವಾಯ್ತು.
ಜೀವನಕ್ಕೆ
ಎಷ್ಟು ಬೇಕೋ ಅಷ್ಟು ಆಸ್ತಿ ಮಾಡಿ
ಆಗಿದೆ. ಆ
ಆಸ್ತಿಯೇ ಮತ್ತಷ್ಟು ಆಸ್ತಿ
ಮಾಡುವಷ್ಟು ಜಾಣ್ಮೆ ಅವರಲ್ಲಿದೆ.
ಅವರದ್ದೊಂದು
ಪರಿಪಾಠವಿದೆ. ಮೊದಲೆರಡು
ಮಕ್ಕಳು ಹುಟ್ಟಿದಾಗ ಮಾವಿನ ಸಸಿ
ನೆಟ್ಟಿದ್ದರು. ಅದರ
ಪೋಷಣೆ ಆ ಮಗುವಿಗೆ ಸೇರಿದ್ದು.
ಚಿಕ್ಕಂದಿನಿಂದಲೇ
ಪ್ರೀತಿ ಆರೈಕೆ ಮಾಡುವ ಗುಣ ಬೆಳೆಯಲಿ
ಎಂಬ ಉದ್ದೇಶ ಅವರದ್ದು.
ಹಾಗೆಯೇ ೩ನೇ
ಮಗು ಹುಟ್ಟಿದಾಗ ಒಂದು ತೆಂಗಿನ
ಸಸಿ ತಂದು ನೆಟ್ಟರು. ಮಗುವಿಗೆ
ಮೃದುಲ ಎಂದು ಹೆಸರಿಟ್ಟರು.
ಮಗು
ಬೆಳೆದು ದೊಡ್ಡದಾದಂತೆ ಅದಕ್ಕೆ
ಆ ಗಿಡದ ಪ್ರಾಮುಖ್ಯತೆ ತಿಳಿಹೇಳುತ್ತಾ
ಪೋಷಣೆ ಮಾಡಲು ಹೇಳಿಕೊಟ್ಟರು.
ಮೃದುಲಳಿಗೊ
ಆ ಮರದ ಮೇಲೆ ಏನೋ ಅಕ್ಕರೆ.
ಆಕೆಯ ಅಕ್ಕಂದಿರು
ಮಾವಿನ ಮರಕ್ಕೆ ದಿನಕ್ಕೊಮ್ಮೆ
ನೀರು ಹಾಕಿದರೆ ಈಕೆ ದಿನಕ್ಕೆರಡು
ಬಾರಿ. ಎಳನೀರು
ಬಿಡುವ ದಿನ ಎಂದು ಅಪ್ಪನ ಹತ್ತಿರ
ಕೇಳಿದ್ದೋ ಕೇಳಿದ್ದು. ಮರ
ಬೆಳೆದು ನಿಂತು ಸವಿಯಾದ ಫಲ ಕೊಡುವ
ದಿನಕ್ಕಾಗಿ ಕಾದು ಕಾದು ಸುಸ್ತಾದಳು.
ಮಗಳು
ಹದಿವಯಸ್ಸಿಗೆ ಬಂದಂತೆ ತೆಂಗು
ಫಲ ಕೊಡಲು ಶುರುಮಾಡಿತು.
ಮೃದುಲಳಿಗೊ
ಖುಷಿಯೋ ಖುಷಿ. ತಿಂಡಿಗೆ
ಊಟಕ್ಕೆ ಎಲ್ಲದಕ್ಕೂ ಅವಳು ಬೆಳೆಸಿದ
ಮರದ ಕಾಯಿಯದ್ದೆ ಆಗಬೇಕು.
ಮನೆಗೆ ಬಂದ
ಸ್ನೇಹಿತೆಯರಿಗೂ ಅವಳು ಪೋಷಿಸಿದ
ಮರ ತೋರಿಸುವ ಹೆಮ್ಮೆ.
ಮೃದುಲ
ಚಂದದ ಹುಡುಗಿ. ಹೆಸರಿನಂತೆಯೇ
ಮೃದು ಮನಸ್ಸು. ಬಲು
ಚೂಟಿ. ನೋಡಲು
ತೆಳ್ಳಗೆ ಬೆಳ್ಳಗೆ ದುಂಡು ಮುಖ.
ಅವಳು ನಕ್ಕರೆ
ಅರಳುವ ಕಣ್ಣುಗಳು ಹೊಳೆಯುವ ರೀತಿ
ನೋಡಲೇ ಒಂದು ಸೊಬಗು. ಕಾಲೇಜ್ಗೆ
ಹೋಗಲು ಶುರು ಮಾಡಿದಮೇಲೆ ಹಿಂದೆ
ಬಿದ್ದ ಹುಡುಗರು ಅದೆಷ್ಟೋ.
ಇದಾವುದಕ್ಕೂ
ಸೊಪ್ಪು ಹಾಕದ ಹುಡುಗಿ ತಾನಾಯ್ತು
ತನ್ನ ಒದಾಯ್ತು ಎಂದೇ ಕಾಲೇಜ್ ಗೆ
ಹೋಗಿ ಬರುವವಳು.
ತೆಂಗಿನ
ಮರ ಫಲ ಕೊಡಲು ಶುರು ಮಾಡಿ ವರ್ಷಗಳೇ
ಸರಿದಿದ್ದವು. ಪ್ರತಿ
ವರ್ಷವೂ ಮೈ ತುಂಬಿ ನಿಲ್ಲುತ್ತಿದ್ದ
ಮರ ಈ ವರುಷ ಯಾಕೋ ಕೊಟ್ಟ ಫಲ ಅತಿ
ಕಡಿಮೆ. ಗಣೇಶಯ್ಯ
ಅಷ್ಟೊಂದು ತಲೆ ಕೆಡಿಸಿಕೊಳ್ಳದಿದ್ದರೂ
ಮೃದುಲ ನೊಂದಳು. ಮನೆಯ
ಆಳು ಮರ ಹತ್ತಿ ನೋಡಲು ಕೌತುಕವೊಂದನ್ನು
ಕಂಡ. ಗರಿ
ಬೆಳೆಯುವ ಕುಡಿಯಲ್ಲಿ ಮರ
ಟಿಸಿಲೊಡೆದಿತ್ತು. ಎರಡು
ಕವಲುಗಳಾಗಿ ಬೆಳೆಯಲು ತೊಡಗಿದ್ದ
ಮರ ಫಲ ಬಿಡುವುದಾ ಮರೆತಿತ್ತು.
ದಿನ
ಕಳೆದಂತೆ ಕವಲು ದೊಡ್ಡದಾಗತೊಡಗಿತು.
ಮೇಲೆ ಹೋದಂತೆಲ್ಲ
ಆಕಾರದಲ್ಲಿ ಬೆಳೆದ ಮರ ವಿಕಾರವಾಗಿ
ಕಾಣುತ್ತಿತ್ತು. ಫಲ
ಕೊಡುವುದು ನಿಂತೇ ಹೋಗಿತ್ತು.
ಇತ್ತ
ಕಾಲೇಜ್ಗೆ ಹೋಗುತ್ತಿದ್ದ ಹುಡುಗಿಯ
ಹಿಂದೆ ಇಬ್ಬರು ಹುಡುಗರು ಬಿದ್ದಿದ್ದರು.
ಇಬ್ಬರೂ
ಮೃದುಲಳಿಗೆ ಪರಿಚಿತರೇ.
ಸಹಪಾಠಿಗಳೇ.
ಇಬ್ಬರೂ ಒಳ್ಳೆಯ
ಹುಡುಗರು. ಓದಿನಲ್ಲಿ
ಸಹ ಮುಂದೆ. ಇಬ್ಬರಿಗೂ
ಮೃದುಲಳ ಕಂಡರೆ ಏನೋ ಅಕ್ಕರೆ.
ಅವಳ ಜಾಣ್ಮೆ
ಕಂಡು ಮೆಚ್ಚುಗೆ. ಅವಳೊಂದಿಗಿನ
ಸ್ನೇಹ ಸಾಲದೆ ಅವಳ ಪ್ರೀತಿಗಾಗಿ
ಹಾತೊರೆಯುವವರು.
ಇದೆಲ್ಲ
ಮೃದುಲಳಿಗೆ ಗೊತ್ತಿಲ್ಲದೇನಲ್ಲ.
ಇಬ್ಬರೂ ಒಳ್ಳೆಯ
ಸ್ನೇಹಿತರಾದ್ದರಿಂದ ಕಳೆದುಕೊಳ್ಳಲು
ಇಷ್ಠ ಪಡದೆ ಸುಮ್ಮನಿದ್ದಳು.
ಸಮಯ ಕಳೆದಂತೆಲ್ಲಾ
ಮೃದುಲ ಅವರಿಬ್ಬರ ಬಗೆಯೂ ಮೃದುವಾಗುತ್ತಾ
ಹೋದಳು. ತೆಂಗಿನ
ಸಸಿ ಸಾಕಿದಂತೆ ಅವರಬ್ಬಿರ ಮೇಲೆ
ಕರುಣೆ ಪ್ರೀತಿ ತುಂಬಿ ಮಾತನಾಡುತ್ತಿದ್ದಳು.
ಅವಳಿಗೆ ಅವರ
ಮೇಲೆ ಪ್ರೀತಿ ಇಲ್ಲದಿದ್ದರೂ
ಮಮತೆ ಇತ್ತು. ಆ
ಹುಡುಗರಿಗೊ ಅದೇ ಪ್ರೀತಿಯ ರೀತಿ
ಕಂಡಿರಲೂ ಸಾಕು. ಒಬ್ಬರಿಗಿಂತ
ಒಬ್ಬರು ಅವಳ ಮೇಲೆ ಪ್ರೀತಿ
ಹರಿಸುವವರೇ. ಹೋದ
ಕಡೆಯಿಂದ ಉಡುಗೊರೆ ತರುವುದು,
ಅವಳಿಗೆ ಹೂವು
ತಿಂಡಿ ತರುವುದು, ಅವಳ
ಒಂದು ನಗೆಗಾಗಿ ಹಾತೊರೆಯುವುದು
ಇದೆಲ್ಲ ಅತಿರೇಕವೇ.
ಇದನ್ನೆಲ್ಲ
ಕಂಡು ಕಾಣಿಸದ ರೀತಿ ಮೃದುಲ
ನಿಭಾಯಿಸುತ್ತಿರಲು ಕಾಲೇಜ್
ಮುಗಿದು ನೌಕರಿ ಸೇರುವ ಸಮಯ ಬಂದೇ
ಬಿಟ್ಟಿತ್ತು. ಅತ್ತ
ತೆಂಗಿನ ಮರ ಎತ್ತರ ಬೆಳೆಯುತ್ತಾ
ಕಾಯಿ ಬಿಡದೆ ಸೊರಗಿ ನಿಂತಿತ್ತು.
ಬೆಳೆದ ಊರು
ಮನೆ ಬಿಟ್ಟು ಬೆಂಗಳೂರಿಗೆ ಹೊರಟು
ನಿಂತ ಮಗಳು ತಂದೆ ತಾಯಿಯ ತಬ್ಬಿಕೊಂಡು
ಅಳುವುದಕ್ಕಿಂತ ಹೆಚ್ಕಾಗಿ ತೆಂಗಿನ
ಮರ ತಬ್ಬಿಕೊಂಡು ಅತ್ತಿದ್ದೇ
ಜಾಸ್ತಿ.
ಬೆಂಗಳೂರಿಗೆ
ಬಂದ ಮೃದುಲಳಿಗೆ ಆ ಹುಡುಗರು
ಆಸರೆಯಾದರು. ಅವಳಿಗೆ
ಒಂದು ಚೂರು ತೊಂದರೆಯಾಗದಂತೆ
ನೋಡಿಕೊಂಡು ಮನೆಯ ನೆನಪು ಬಾರದಂತೆ
ತಡೆದರು. ಕೊನೆಗೆ
ಒಂದು ದಿನ ಮೃದುಲ ಬೇಡವೆಂದಿದ್ದ
ದಿನ ಬಂದೇ ಬಿಟ್ಟಿತ್ತು.
ಇಬ್ಬರು
ಹುಡುಗರೂ ಒಬ್ಬರಾದ ಮೇಲೆ ಒಬ್ಬರಂತೆ
ಮದುವೆಯಾಗಲು ಕೇಳಿಕೊಂಡರು .
ತಮ್ಮ ಪ್ರೀತಿ
ಭಿನ್ನವಿಸಿ ತನ್ನನ್ನೇ ಮದುವೆಯಾಗ
ಬೇಕೆಂದು ಪರಿಪರುಯಾಗಿ ಪೀಡಿಸಿದರು.
ಮೃದುಲಳಿಗೊ
ವಿಚಿತ್ರ ಸಂಕಟ. ಇಬ್ಬರೂ
ತನ್ನ ಸ್ನೇಹಿತರು, ಒಳ್ಳೆಯ
ಹುಡುಗರು. ಒಬ್ಬರನ್ನು
ಬಿಟ್ಟು ಇನ್ನೊಬ್ಬನನ್ನು ಒಪ್ಪಿದರೆ
ಅವನ ಸ್ನೇಹ ಪ್ರೀತಿಗೆ ದ್ರೋಹ
ಬಗೆದಂತೆ.
ಇತ್ತ
ಬೆಳೆದು ನಿಂತಿದ್ದ ತೆಂಗಿನ ಮರ
ಫಲ ಕೊಡುವುದ ನಿಲ್ಲಿಸಿ ಬಿಟ್ಟಿತ್ತು.
ಗರಿಗಳೆಲ್ಲಾ
ಉದುರಲು ಶುರುವಾಗಿ ಮರ ಬೋಳು
ಬೋಳಾಗಿ ಕಾಣಲು ಶುರುವಾಗಿತ್ತು.
ಕವಲುಗಳು
ಮಾತ್ರ ಕಣ್ಣಿಗೆ ರಾಚುವಂತೆ
ಕಾಣುತ್ತಿದ್ದವು. ಮರ
ಹೀಗೆ ಬೋಳಾಗಿ ನಿಂತದ್ದನ್ನು
ನೋಡಿದ ಯಾರೋ ಹಿರಿಯರು ಒಂದು ಕವಲು
ತೆಗೆಸಿಹಾಕಲು ಗಣೇಶಯ್ಯನಿಗೆ
ಸೂಚಿಸಿದರು. ಒಂದು
ಕವಲು ತೆಗೆಸಿ ಹಾಕಿದರೆ ಮತ್ತೆ
ಫಲ ಕೊಡುವ ಬಗ್ಗೆ ಹೇಳಿದರು.
ಮೃದುಲ
ಕೂಡ ಹಾಗೆ ಯೋಚಿಸಿದಳು.
ಮೊದಲ ಹುಡುಗನಿಗೆ
ಹೂಂ ಎಂದು ಹೇಳಿ ಇನ್ನೊಬ್ಬನ
ಸ್ನೇಹಕ್ಕೆ ಕಡಿವಾಣ ಹಾಕಲು
ಯೋಚಿಸತೊಡಗಿದಳು. ಅದೇ
ಸರಿ ಎಂದು ಕೂಡ ಯೋಚಿಸಿದಳು.
ಆದರೆ ಅದು
ಎರಡನೇ ಹುಡುಗನ ಮೇಲೆ ಮಾಡುವ ಗಾಢ
ಪರಿಣಾಮ ಯೋಚಿಸಿ ಸುಮ್ಮನಾದಳು.
ಅತ್ತ
ಗಣೇಶಯ್ಯ ಕೂಡ ಹಾಗೆ ಯೋಚಿಸಿದರು.
ಒಂದು ಕವಲು
ತೆಗೆಸಿಹಾಕಿದರೂ ಮರದಾಳದಿಂದ
ಬಂದ ಅದರ ಸೆಲೆಯನ್ನು ತೆಗೆಸಿ
ಹಾಕಲು ಸಾಧ್ಯವೇ ಇಲ್ಲ. ಮರ
ಮತ್ತೆ ಚಿಗುರುವ ಸಾಧ್ಯತೆ ಕ್ಷೀಣ.
ಒಂದು ಕವಲು
ಕಡಿದರೂ ಮರ ಮೊದಲಿನಂತಾಗುವ ಬಗೆ
ಅವರಿಗೆ ಯಾವುದೇ ನಂಬಿಕೆ ಇರಲಿಲ್ಲ.
ಮೃದುಲ
ಬರು ಬರುತ್ತಾ ಒಂಟಿಯಾಗತೊಡಗಿದಳು.
ಒಬ್ಬನೊಂದಿಗೆ
ಮಾತನಾಡಿದರೆ ಇನ್ನೊಬ್ಬನಿಗೆ
ಬೇಸರ. ಒಬ್ಬನೊಂದಿಗೆ
ಊಟಕ್ಕೆ ಹೋದರೆ ಇನ್ನೊಬ್ಬನಿಗೆ
ಕೋಪ, ಜಗಳ,
ಮುನಿಸು.
ನೆಮ್ಮದಿ
ಕಳೆದುಕೊಂಡ ಮೃದುಲ ಕೆಲಸದ ಮೇಲೆ
ಆಸಕ್ತಿ ಕಳೆದುಕೊಂಡಳು. ಆ
ಹುಡುಗರಿಗೆ ಇದ್ಯಾವುದೂ ಅರ್ಥವಾಗುವ
ಹಾಗೆ ಕಾಣಲಿಲ್ಲ. ಕೆಲಸದ
ಮೇಲೆ ಆಸಕ್ತಿ ಹೋದದ್ದು ಕಂಪನೀಯ
ಮ್ಯಾನೇಜರ್ಗೆ ಗೊತ್ತಾಗಾದೇನು
ಅಲ್ಲ. ಕರೆದು
ತಿಳಿ ಹೇಳಿದ ಮ್ಯಾನೇಜರ್ ಅವಳ
ಕೆಲಸ ಸುಧಾರಿಸಲು ೨ ತಿಂಗಳ ಗಡುವು
ಕೊಟ್ಟರು. ಇಲ್ಲದಿದ್ದರೆ
ಕೆಲಸದಿಂದ ತೆಗೆಯುವ ಮಾತು ಬಂದಿತು.
ನೊಂದ ಮೃದುಲ
ಇದ್ಯಾವುದರ ಸಹವಾಸವೇ ಬೇಡೆಂದು
೨ ವಾರ ರಜ ಹಾಕಿ ಊರಿಗೆ ಬಂದಳು.
ಊರಿಗೆ
ಬಂದ ಮೃದುಲ ಮೊದಲು ಓಡಿದ್ದು ತನ್ನ
ತೆಂಗಿನ ಮರಕ್ಕೆ. ಅಲ್ಲಿ
ಕಂಡ ದೃಶ್ಯ ಕಂಡು ನೊಂದ ಹುಡುಗಿ
ಕಣ್ಣೀರು ಸುರಿಸಿದಳು.
ತನ್ನ ಸ್ತಿತಿಗೂ
ಮರದ ಸ್ತಿತಿಗೂ ಇರುವ ಸಾಮ್ಯತೆ
ಕಂಡು ಮರುಗಿದಳು.
ರಾತ್ರಿ
ಮಲಗಿದಾಗ ಕನಸಿನಲ್ಲಿ ಬಂದ ತೆಂಗಿನ
ಮರ ತನ್ನನ್ನು ಬೀಳ್ಕೊಡುವಂತೆ
ಕೇಳಿತು. ತನ್ನಿಂದ
ಇನ್ಯಾವುದೇ ಪ್ರಯೋಜನವಿಲ್ಲ,
ನನ್ನಿಂದ
ನಿನಗೆ ಕೇವಲ ನೋವು. ನನ್ನನ್ನು
ಕಡಿದು ಹಾಕು ಎಂದು ಹೇಳಿತು.
ಎಚ್ಚರವಾದ
ಮೃದುಲ ಬೆಳಗ್ಗೆ ಎದ್ದು ಏನೋ
ನಿರ್ಧರಿಸಿದಂತೆ ಕೊಡಲಿ ತೆಗೆದುಕೊಂಡು
ತೋಟಕ್ಕೆ ಹೋದಳು. ಒಂದೇ
ಸಮನೆ ಮರ ಕಡಿದು ತುಂಡು ಮಾಡಿದಳು.
ಅವಳ ಕೈ ನಿಂದ
ಪೋಷಣೆಗೊಂಡು ಬೆಳೆದ ಮರ ಧರೆಗುರುಳಿತ್ತು.
ಕಣ್ಣೇರು
ಸುರಿಸುತ್ತಾ ಮನೆಗೆ ಬಂದ ಹುಡುಗಿ
ಅಪ್ಪನ ಬಳಿ ನಿಂತು ನಾನು ಇನ್ನು
ಬೆಂಗಳೂರಿಗೆ ಹೋಗುವುದಿಲ್ಲ,
ನನಗೆ ಮದುವೆಗಾಗಿ
ಹುಡುಗನನ್ನು ನೋಡಲು ಶುರು ಮಾಡಿ
ಎಂದು ಹೇಳಿ ಕೋಣೆ ಹೊಕ್ಕು ಬಾಗಿಲು
ಝಾಡಿಸಿದಳು.
Comments
Post a Comment