ಐಸ್ಲ್ಯಾಂಡ್ / ಐಸ್ ಲ್ಯಾಂಡ್ ಯುರೋಪ್ ಖಂಡದ ದ್ವೀಪಗಳಲ್ಲೊಂದು. ಯುರೋಪ್ ಭೂಖಂಡದಿಂದ ಸುಮಾರು ೧೨೦೦ ಕಿಲೋಮೀಟರ್ಗಳಷ್ಟು ದೂರದ ದ್ವೀಪ ರಾಷ್ಟ್ರ. ಸುಮಾರು ೪೦೦೦೦ ಚದರ ಮೈಲುಗಳ ವಿಸ್ತೀರ್ಣದ (ಕರ್ನಾಟಕದ ಅರ್ಧದಷ್ಟು) ದೇಶದ ಜನಸಂಖ್ಯೆ ಕೇವಲ ಮೂರೂವರೆ ಲಕ್ಷ.
ಉತ್ತರ ಧೃವಕ್ಕೆ ಸಮೀಪದ ಈ ದ್ವೀಪ ರಾಷ್ಟ್ರ ಸದಾ ಹಿಮ ಮುಚ್ಚಿದ ಪರ್ವತ,
ಗ್ಲೇಶಿಯರ್ಗಳಿಂದ ಚಿರಪರಿಚಿತ. ಇಲ್ಲಿಂದ ಬೇಸಿಗೆಯ ಸರಾಸರಿ ತಾಪಮಾನ ೧೩ ಡಿಗ್ರೀ ಅಂದ್ರೆ ಅಲ್ಲಿನ ಚಳಿಗಾಲದ ಪರಿಸ್ಥಿತಿ ಹೇಗಿರಬೇಡ.
ಇನ್ತಿರ್ಪ ಐಸ್ಲ್ಯಾಂಡ್ ಹಲವಾರು ವಿಷಯಗಳಿಗೆ ಪ್ರಖ್ಯಾತಿ ಪಡೆದಿದೆ. ಐಸ್ಲ್ಯಾಂಡ್ನಲ್ಲಿ ಕಾಣಸಿಗುವ ರಾತ್ರಿಯ ಕಾರ್ಗತ್ತಲ್ಲನ್ನು ಸೀಳಿ ಕಣ್ಣಿಗೆ ಹಬ್ಬ ಉಂಟುಮಾಡುವ ಅರೋರಾ ಬೋರೆಲಿಸ್,
ಮುನ್ಸೂಚನೆಯನ್ನೇ ಕೊಡದೆ ಬೆಂಕಿ ಧೂಳು ಉಗುಳುವ ಜ್ವಾಲಾಮುಖಿಗಳು,
ನೀಲ ಬಣ್ಣದ ಸಮುದ್ರತೀರಗಳು,
ಬಿಸಿನೀರಿನ ಬುಗ್ಗೆಗಳು,
ಪಿಕ್ಚರ್ ಪರ್ಫೆಕ್ಟ್ ಜಲಪಾತಗಳು.. ಹೀಗೆ ಲಿಸ್ಟ್ ಮುಗಿಯುವುದೇ ಇಲ್ಲ.
ಐಸ್ಲ್ಯಾಂಡ್ ನೋಡಲು ಒಂದು ವಾರ ಸಾಕಾಗಾವುದಿಲ್ಲ. ಐಸ್ಲ್ಯಾಂಡ್ ಸುತ್ತ ನಿರ್ಮಿಸಿರುವ ವರ್ತುಲ ರಸ್ತೆ ಅರ್ಥಾತ್ ರಿಂಗ್ ರೋಡ್ ಐಸ್ಲ್ಯಾಂಡ್ ನ ಹಲವು ಕೌತುಕಗಳಿಗೆ ರಹದಾರಿ. ನಮ್ಮ ಬೆಂಗಳೂರಿನ ರಿಂಗ್ ರೋಡ್ ಬೆಳ್ಳಂದೂರು ಕೆರೆಯ ನೊರೆ, ಸಿಲ್ಕ್ ಬೋರ್ಡ್ನ ಟ್ರಾಫಿಕ್, ಈಕೊ ಸ್ಪಸೇನ ಎತ್ತರದ ಬಿಲ್ಡಿಂಗ್ಗಳ ದರ್ಶನ ಮಾಡಿಸಿದರೆ, ಐಸ್ಲ್ಯಾಂಡ್ ನ ರಿಂಗ್ ರೋಡ್ ದರ್ಶನ ಮಾಡಿಸುವುದು ಸ್ಕೋಗಾರ್ ಜಲಪಾತ, ಏೆಯಾಫ್ಯಾಳ್ಳಾಯೋಕುಲ್ ( Eyjafjallajökull ) ಜ್ವಾಲಾಮುಖಿ, ಆರೋರಾ ಬೋರೆಲಿಸ್, ಯೋಕೂರ್ಸಾರ್ಲೋನ್ ಗ್ಲೇಶಿಯರ್ ಇನ್ನೂ ಮುಂತಾದವು.
ಅಂದಹಾಗೆ,
ಐಸ್ಲ್ಯಾಂಡ್ ನ ಊರು ಅಥವಾ ಸ್ಥಳಗಳ ಹೆಸರು ಹೇಳಲು ನಮ್ಮಂಥ ಸಾಮಾನ್ಯಾತಿಸಾಮಾನ್ಯ ಜನರಿಗೆ ಅಸಾಧ್ಯ.
ಇಲ್ಲಿನ ಜ್ವಾಲಾಮುಖಿಗಳು, ಬಿಸಿನೀರಿನ ಬುಗ್ಗೆಗಳಿಗೆ ಮೂಲ ಕಾರಣ ಐಸ್ಲ್ಯಾಂಡ್ ನ ಭೂಮ್ಯಾಳದಲ್ಲಿ
ನೆಡೆಯುತ್ತಿರುವ ಚಟುವಟಿಕೆಗಳು. ನಮಗೆಲ್ಲ ಗೊತ್ತಿರುವಂತೆ ಈ ನಮ್ಮ ಭೂಮಿ ಹಲವಾರು ಟೆಕ್ಟೊನಿಕ್
ಪ್ಲೇಟ್ಗಳಿಂದ ಮಾಡಲ್ಪಟ್ಟಿವೆ. ಒಂದಕ್ಕೊಂದು ಉಜ್ಜುತ್ತಾ ಹಿಂದೆ ಮುಂದೆ ಸರಿಯುತ್ತಿರುವ ಈ
ಪ್ಲೇಟ್ಗಳು ಭೂಮಿಯ ಮೇಲಿನ ಬಹುಪಾಲು ಭೂಕಂಪ, ಜ್ವಾಲಾಮುಖಿ,
ಸುನಾಮಿಗಳಿಗೆ ಕಾರಣ.
ಉದಾರಹರಣೆಗೆ ಭಾರತದ ಪ್ಲೇಟ್ ಏಶಿಯಾದ ಪ್ಲೇಟ್
ನ ಕೆಳಗೆ ನುಸಿಯುತ್ತಿರುವುದರಿಂದ ನಮ್ಮ ಬೃಹತ್ ಹಿಮಾಲಯಪರ್ವತಗಳು ಸೃಷ್ಟಿಯಾಗಿವೆ. ನಮ್ಮ ಭಾರತದ
ಪ್ಲೇಟ್ ಹೇಗೆ ಏಶಿಯಾದ ಕಡೆ ಮುಂದುವರೆಯುತ್ತಿದೆಯೋ ಹಾಗೆಯೇ ಆಫ್ರಿಕಾದ ಪ್ಲೇಟ್ನಿಂದ ದೂರ ಸರಿಯುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆ.
ಐಸ್ಲ್ಯಾಂಡ್ ಒಂದು ವಿಚಿತ್ರವಾದ ಸಂಧಿಗ್ಢದ
ಪರಿಸ್ತಿತಿಯಲ್ಲಿ ಸಿಲುಕಿದೆ. ಐಸ್ಲ್ಯಾಂಡ್ನ ದ್ವೀಪ ಉತ್ತರ ಅಮೇರಿಕ ಹಾಗೂ ಯುರೋಪ್ ಪ್ಲೇಟ್ಗಳು
ಕೂಡುವ ಬಿಂದುವಿನಲ್ಲಿದೆ. ಆದರೆ ಇಲ್ಲಿ ಅಮೇರಿಕ ಹಾಗೂ ಯುರೋಪ್ ಖಂಡಗಳು ಒಂದರಿಂದ ಇನ್ನೊಂದು ದೂರ
ಸರಿಯುತ್ತಿವೆ. ಒಂದು ಬಟ್ಟೆಯನ್ನು ಹಿಡಿದು ಎರಡೂ ದಿಕ್ಕಿನಿಂದ ಇಬ್ಬರು ಹಿಡಿದು ಎಳೆದಂತೆ
ಐಸ್ಲ್ಯಾಂಡ್ ನ ಪರಿಸ್ಥಿತಿ. ಐಸ್ಲ್ಯಾಂಡ್ ನ ಮಧ್ಯದಲ್ಲಿ ಹಾದುಹೋಗಿರುವ ಈ ಪ್ಲೇಟ್ಗಳ ಬೌಂಡರಿ
ತನ್ನ ಉದ್ದಗಲಕ್ಕೂ ಹಲವಾರು ಜ್ವಾಲಾಮುಖಿಗಳ ಸೃಷ್ಟಿಸಿದೆ.
೨೦೧೦ರ Eyjafjallajökull ಜ್ವಾಲಾಮುಖಿ ಒಂದು ವಾರಗಳ ಕಾಲ ಇಡೀ ಉತ್ತರ ಯುರೋಪ್ ನ ವಾಯುಯಾನ ವ್ಯವಸ್ತೆಯನ್ನೇ
ಬುಡಮೇಲುಮಾಡಿತ್ತು. ಜ್ವಾಲಾಮುಖಿಯಿಂದೆದ್ದ ಆಕಾಶಕ್ಕೆ ಚಿಮ್ಮಿದ ಧೂಳು ಇಡೀ ಉತ್ತರ ಯುರೋಪ್ನ
ಬಹುಪಾಲು ದೇಶಗಳ ಮೇಲೆ ಧೂಳಿನ ಪದರ ಹೊದಿಸಿತ್ತು. ಶಿಖರದ ಮೇಲಿದ್ದ ಹಿಮ ಜ್ವಾಲಾಮುಖಿಯ ಬಿಸಿಗೆ
ಕರಗಿ ಜ್ವಾಲಾಮುಖಿಯ ಒಳಗೆ ಇಳಿದಾಗ ಆದ ವಿಸ್ಪೋಟ ಸಿಲಿಕನ್ ಮಿಶ್ರಿತ ಹೊಗೆಯನ್ನು ನಭಕ್ಕೆ
ಚಿಮ್ಮಿಸಿತ್ತು.
Eyjafjallajökull ನ ಸಮೀಪವೇ ಇರುವ ಕಾಟ್ಲ ಜ್ವಾಲಾಮುಖಿ
ಸದ್ಯದಲ್ಲೇ ವಿಸ್ಪೋಟನೆಯಾಗುವ ಎಲ್ಲ ಲಕ್ಷಣಗಳಿದ್ದು ಭೂಗರ್ಭಶಾಸ್ತ್ರಜ್ಞರ ಸಂಶೋಧನೆ ಬಿರುಸಾಗಿ
ನೆಡೆದಿದೆ.
ಈ ಟೆಕ್ಟೊನಿಕ್ ಪ್ಲೇಟ್ಗಳ
ದೂರಸರಿಯುವಿಕೆಯಿಂದ ಉಂಟಾಗಿರುವ ಇನ್ನೊದು ವಿಸ್ಮಯ ತಿಂಗ್ವಿಲ್ಲರ್ (Þingvellir) ಸರೋವರ. ಪ್ಲೇಟ್ಗಳ ದೂರ
ಸರಿಯುವಿಕೆಯಿಂದ ಉಂಟಾದ ಕಣಿವೆಯಂತ ಜಾಗದಲ್ಲಿ ಉಕ್ಕಿದ ಪರಿಶುದ್ಧ ನೀರಿನ ಸರೋವರ ಸ್ಕ್ಯೂಬ
ಡೈವಿಂಗ್ ಗೆ ಹೆಸರುವಾಸಿ. ಕೆಲವೇ ಕೆಲವು ಅಡಿಗಳ ಅಗಲವಿರುವ ಈ ಉದ್ದವಾದ ಸರೋವರದ ತಳಕ್ಕೆ ಹೋಗಿ
ನೋಡಿದರೆ ಭೂಮಿ ಉಧ್ಭವಿಸುವ ಕೌತುಕ ನೋಡಬಹುದು.
ಐಸ್ಲ್ಯಾಂಡ್ ಗೆ ಹರಿದುಬರುವ ಬಹುಪಾಲು
ಪ್ರವಾಸಿಗರ ಬಹುಮುಖ್ಯ ಆಕರ್ಷಣೆ ಆರೋರಾ ಬೋರೆಲಿಸ್. ಸೌರ ಜ್ವಾಲೆ ಚಿಮ್ಮಿದಾಗ ಭೂಮಿಯತ್ತ
ನುಗ್ಗಿಬರುವ ವಿದ್ಯುದೀಕರಣಗೊಂಡ ಕಣಗಳು ಭೂಮಿಯ ಅಯಸ್ಕಾಂತೀಯ ಸೆಲೆಯ ಹೊಡೆತಕ್ಕೆ ಸಿಕ್ಕು
ಓಕುಳಿಯಾಡುತ್ತವೆ. ಹಸಿರು, ನೀಲಿ, ಕೆಂಪು
ಹೀಗೆ ಹಲವು ಬಣ್ಣಗಳನ್ನು ಆಕಾಶದಲ್ಲಿ ಮೂಡಿಸಿ ನೋಡುಗನ ಕಣ್ಣು ಸೆಳೆಯುತ್ತವೆ. ವರ್ಷಪೂರ್ತಿ ಈ
ವಿಸ್ಮಯ ನೋಡಲು ಸಿಕ್ಕರೂ ಚಳಿಗಾಲದಲ್ಲಿ ಇದರ ರಂಗು ಹೆಚ್ಚು. ನಗರಾಹಾಲ ದೀಪದಿಂದ ದೂರ ನಿಂತು
ಮಧ್ಯ ರಾತ್ರಿಯ ಕಡುಗಪ್ಪು ಆಕಾಶದಲ್ಲಿ ಆರೋರಾ ನೋಡುವ ಮಜವೇ ಬೇರೆ. ಐಸ್ಲ್ಯಾಂಡ್ನಲ್ಲಿ ಬೇಸಿಗೆಯಲ್ಲಿ
ಸುಧೀರ್ಘ ಹಗಲು, ಎಸ್ಟು ಸುಧೀರ್ಘವೆಂದರೆ ಸೂರ್ಯ ಮುಳುಗುವುದು
ಕೇವಲ ೨-೩ ಘಂಟೆಗಳು ಮಾತ್ರ. ಹೀಗಾಗಿ ಚಳಿಗಾಲದ ರಾತ್ರಿಗಳೇ ಆರೋರಾ ನೋಡಲು ಪ್ರಶಸ್ತ ಸಮಯ.
ಅಂದಹಾಗೆ ಐಸ್ಲ್ಯಾಂಡ್ ನ ಕರೆನ್ಸೀ ಕ್ರೋನದ
ಬೆಲೆ ಕಡಿಮೆ ಆದರೂ (೩ ರುಪಾಯಿಗೆ ೨ ಕ್ರೋನ ) ಐಸ್ಲ್ಯಾಂಡ್ನ ಜೀವನ ವೆಚ್ಚ ಬಲು ದುಬಾರಿ.
ಸುಮ್ಮನೆ ೧೦ ದಿನದ ಟೂರ್ ಹೊಡೆದು ಬರಲು ಒಂದೆದರು ಲಕ್ಷವಾದರೂ ಬೇಕೇ ಬೇಕು. ಕಾರ್ ಬಾಡಿಗೆಗೆ
ಕೊಂಡು ವಾರಗಳ ಕಾಲ ರಿಂಗ್ ರೋಡ್ ನಲ್ಲಿ ಪ್ರಯಾಣಿಸುತ್ತಾ ಐಸ್ಲ್ಯಾಂಡ್ ಸವಿಯುವವರ ಸಂಖ್ಯೆ
ಹೆಚ್ಚು. ಅಲ್ಲಲ್ಲಿ ಕ್ಯಾಮ್ಪಿಂಗ್ ಗ್ರೌಂಡ್ ಕೂಡ ಬಾಡಿಗೆಗೆ ಲಭ್ಯ. ನನ್ನ ಐಸ್ಲ್ಯಾಂಡ್ ಟ್ರಿಪ್
ಮುಂದಿನ ವರ್ಷ. ನಿಮ್ಮದು ಯಾವಾಗ? ಹೋಗಿಬನ್ನಿ..





Super :-)
ReplyDelete