ಅದು ೨೦೦೯ , ನನ್ನ ಬಳಿ ಒಂದು ಕರೀ ಬಣ್ಣದ ಆಕ್ಟಿವಾ ಇತ್ತು . ಅದರ ವರ್ಣನೆ ಈಗಾಗಲೇ ಮಾಡಿದ್ದೇನೆ . ಏನೇ ಅಂದರೂ ಅದೊಂದು ನಂಬಿಕಸ್ಥ ಗಾಡಿ . ಎಲ್ಲೆಂದರಲ್ಲಿಗೆ ಎಷ್ಟೊತ್ಟಿನಲ್ಲಿ ಎಷ್ಟು ಲೋಡ್ ಹಾಕಿದ್ರೂ ಎಳೆದು ಕೊಂಡು ಹೋಗುತ್ತಿದ್ದ ಗಾಡಿ ಅದು . ಅದರ ಮೇಲೆ ಕೂತು ಆಕ್ಸೆಲರೇಟರ್ ಕೊಟ್ರೆ ರೊಯ್ಯನೆ ನುಗ್ಗಿ ರಸ್ತೆಯಲ್ಲಿರುವ ಗಾಡಿಗಳನ್ನೆಲ್ಲ ಹಿಂದೆ ಹಾಕುತ್ತಿತ್ತು . ಆಗತಾನೆ ನೈಸ್ ರಸ್ತೆ ಓಡಾಟಕ್ಕೆ ತೆರವಾಗಿತ್ತು . ರಸ್ತೆಯಲ್ಲಿ ವಾಹನಗಳ ಓಡಾಟ ತೀರಾ ವಿರಳ . ಎಲ್ಲಿಂದ ಹೊರಟರೆ ಎಲ್ಲಿಗೆ ಹೋಗತ್ತೆ ಅನ್ನೋದೇ ಗೊತ್ತಾಗ್ದೇ ಇರೋಷ್ಟು ಅಪರಿಚಿತ ರಸ್ತೆ ಅದು . ಖಾಲಿ ರಸ್ತೆಯ ತೆರೆದ ಬಾಹುಗಳ ಅಪ್ಪುಗೆಯ ಆಸೆಗೆ ಮುನ್ನುಗ್ಗಿ ಬರೋ ವಾಹನಗಳು ತಿರುವು ತಪ್ಪಿಸಿಕೊಂಡು ಅಲೆಯುತ್ತಿದ್ದ ದೃಶ್ಯ ಸಾಮಾನ್ಯ . ಬನಶಂಕರಿಯ ಪಿ ಇ ಎಸ್ ಕಾಲೇಜ್ ಬಳಿ ಶುರುವಾಗುತ್ತಿದ್ದ ರಸ್ತೆ ಮುಂದೆ ಎಡಕ್ಕೆ ತಿರುಗಿ ಕನಕಪುರ ರಸ್ತೆ , ಬನ್ನೇರುಘಟ್ಟ ರಸ್ತೆಯ ಕಡೆ ಅಥವಾ ಬಲಕ್ಕೆ ತಿರುಗಿದರೆ ಮೈಸೂರು ರಸ್ತೆಯ ಕಡೆ ಹೊರಳುತ್ತಿತ್ತು . ಈಗ ಬಿಡಿ ನೀವೆಲ್ಲ ಸಾವಿರಾರು ಬಾರಿ ಆ ರಸ್ತೆಯಲ್ಲಿ ಒಡಾಡಿರುತ್ತೀರ . ಆಗ ಆ ರಸ್ತೆ ಹೊಸದು , ಬೋರ್ಡ್‌ಗಳು ಕೂಡ ಸರಿಯಾಗಿ ಇರಲಿಲ್ಲ . ಎಲ್ಲಿ ತಿರುಗು ಹೇಗೆ ಹೋಗಬೇಕೆಂಬುದೇ ಒಂದು ಯಕ್ಷಪ್ರಶ್ನೆಯಾಗಿತ್ತು . ಹೀಗಿರಲು ಒಂದು ದಿನ ಬನ್ನೇರುಘಟ್ಟ ರಸ್ತೆಯ ಅಮರ್ ಮನೆಗೆ ಹೊರಟಿದ್ದೆ . ಸಮಯ ಸುಮಾರು ರಾತ್ರಿ ೧೦ : ೩೦ ಇರಬಹುದು...